ಬಹುಶಃ ಸಿರಸಿಯ ಸುತ್ತಮುತ್ತ ಇಷ್ಟು ಸಮೃದ್ಧವಾಗಿರುವ ಏಲಕ್ಕಿ ಪಸಲು ಕಾಣಲು ಸಿಗದು. ಪ್ರಥಮ ಬೆಳೆಯ ಕೊಯ್ಲಿನ ಖುಷಿಯಲ್ಲಿದ್ದಾರೆ ಶಿರಸಿ ಬಳಿಯ ಏಳಗದ್ದೆ ಊರಿನ ಯುವ ಕೃಷಿಕ ಮಹೇಂದ್ರ ಹೆಗಡೆ. ಕಾಕ ಚಂದ್ರಶೇಖರ ಹೆಗಡೆ ಅವರ ಒಂದು ಎಕರೆ ಅಡಿಕೆ ತೋಟದ ನಡುವೆ 600 ಏಲಕ್ಕಿ ಹಿಂಡು ಹಾಕಿ, ಕಳೆದ ಒಂದುವರೆ ವರ್ಷದಿಂದ ಶ್ರಮವಹಿಸಿ ಆರೈಕೆ ಮಾಡಿದ್ದಾರೆ. ತಂದೆ ಮಹಾಬಲೇಶ್ವರ ಹೆಗಡೆ ಕಾಕ ಚಂದ್ರಶೇಖರ ಹೆಗಡೆ ಅವರ ಸಂಪೂರ್ಣ ಸಹಕಾರ ಯುವಕನಿಗಿದೆ. ಸಾಂಬಾರ ಮಂಡಳಿ ಯಿಂದ (spice board) ಸಹಾಯಧನ ಪಡೆದು, ಬಿ ಕೆ ರಮೇಶ್ ಅವರ ಮಾರ್ಗದರ್ಶನದಿಂದ ಇಂದು ಏಲಕ್ಕಿ ಸಮೃದ್ಧವಾಗಿ ಬೆಳೆದಿದೆ.
ಸಮೃದ್ಧವಾಗಿ ಬೆಳೆಯಲು ಕಾರಣ
ಮನೆಯೆದುರಿನ ತೋಟದಲ್ಲಿ ತಂಪು ತಾನಾಗಿಯೇ ಇವರಿಗೆ ಲಭ್ಯವಾಗಿದೆ ಜೊತೆಗೆ ಡ್ರಿಪ್ ಮೂಲಕ ನೀರಾವರಿ ಸೌಲಭ್ಯ ಅಳವಡಿಸಿಕೊಂಡಿದ್ದಾರೆ. ಇಲ್ಲಿ ಏಲಕ್ಕಿ ಕಾಡು ನಿರ್ಮಾಣವಾಗಿದೆ ಎಂದರು ತಪ್ಪಾಗಲಾರದು. ಪ್ರತಿಯೊಂದು ಏಲಕ್ಕಿ ಗಿಡದಲ್ಲಿ ಏಲಕ್ಕಿ ಕಾಯಿ, ಹಣ್ಣು ತುಂಬಿ ತುಳುಕಾಡುತ್ತಿದೆ. ಏಲಕ್ಕಿಯೇ ಅಪರೂಪವಾದ ಈಗಿನ ದಿನದಲ್ಲಿ ಸಮೃದ್ಧವಾಗಿ ಬೆಳೆದ ಏಲಕ್ಕಿ ನೋಡಿದರೆ ಎಂತಹವರಿಗೂ ಖುಷಿಯೆನಿಸುತ್ತದೆ. ಸಹಜವಾಗಿ ಯುವಕ ಮಹೇಂದ್ರ ಮೊಗದಲ್ಲಿ ಸಂತಸ ಮೂಡಿದೆ.
ಕಣ್ತುಂಬಿ ನೋಡುವಂತಿದೆ
ಮೊದಲನೆಯದಾಗಿ ತೋಟ ತಂಪಿನಿಂದ ಕೂಡಿದೆ, ನೀರಾವರಿ ಅಳವಡಿಸಿಕೊಂಡಿದ್ದಾರೆ, ಫೆಬ್ರವರಿ ತಿಂಗಳಲ್ಲಿ ಹಸಿ ಅಡಿಕೆ ಸುಲಿದ ಸಿಪ್ಪೆಯನ್ನು ತೋಟದ ಬಣ್ಣಕ್ಕೆ ಮುಚ್ಚಿದ್ದಾರೆ. ಹಸಿ ಅಡಿಕೆ ಸಿಪ್ಪೆಯ ತೊಗರಿನ ಅಂಶ ಏಲಕ್ಕಿಗೆ ಪೂರಕವಾಗಿದೆ ಎನ್ನುವುದು ಅವರ ಅಭಿಪ್ರಾಯ. ಕೊಟ್ಟಿಗೆ ತೊಳೆದ ನೀರು ಹಾಗೂ ಸ್ಲರಿಯನ್ನು ಪ್ರತಿ ತಿಂಗಳು ಏಲಕ್ಕಿ ಗಿಡಕ್ಕೆ ಉಣಿಸುತ್ತಾರೆ. ಈಗ ಪ್ರತಿವಾರವೂ ಏಲಕ್ಕಿ ಅವರ ಕೈ ತುಂಬುತ್ತಿದೆ.
ಆರೈಕೆ ಮುಖ್ಯ
ಏಲಕ್ಕಿ ಸಸಿ ನೆಟ್ಟು 3-4 ತಿಂಗಳಿಗೆ ಕಾಂಡದಲ್ಲಿ ಹುಳು ಹೊಡೆದು ಕೊಳೆಯುವ ಸಾಧ್ಯತೆ ಇರುತ್ತದೆ, ಈ ಸಂದರ್ಭದಲ್ಲಿ ಕೊಳೆತ ಕಾಂಡ ಬೇರ್ಪಡಿಸಿ, ತೆಗೆದು ರೋಗರ್ ಸಿಂಪಡಣೆ ಮಾಡಬೇಕು, ಇಲ್ಲದಿದ್ದರೆ ಎಲ್ಲ ಗಿಡಗಳಿಗೂ ಹರಡುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಮಹೇಂದ್ರ. ಸಾವಯವ ಪದ್ಧತಿಯನ್ನೇ ಬಳಸಿ ಅಗತ್ಯವಿದ್ದಲ್ಲಿ ಮಾತ್ರ ರಾಸಾಯನಿಕ ಬಳಸುವ ಮಹೇಂದ್ರ ಅವರ ಆಲೋಚನೆ ಮೆಚ್ಚುಗೆಗೆ ಪಾತ್ರವಾಗಿದೆ.
ಬಗ್ಗೆ ಹಂಸ YouTube ಚಾನೆಲ್ ನಲ್ಲಿ ವಿಡಿಯೋ ಪ್ರಸಾರವಾಗಿದ್ದು, ಕೆಳಗಿರುವ ಲಿಂಕ್ ಒತ್ತಿ ಹಿಡಿದು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ
https://youtu.be/hDexdptCmqg
0 Comments