Hot Posts

6/recent/ticker-posts

ಸ್ವಂತ ಜಮೀನೇ ಬೇಕಾ ಕೃಷಿಗೆ? ಈ ಭಟ್ಟರ ಕೃಷಿ ಬದುಕು ಹೇಗೆ ನೋಡಿ!

ಜಮೀನು ಇಲ್ಲಾ ಎಂದು ಶಹರದ ಕಡೆ ಮುಖ ಮಾಡೋ ಮಂದಿ… ಇರುವ ಸಣ್ಣ ಜಮೀನು ಬದುಕು ಹೇಗೆ ಎಂದು ಅಲವತ್ತುಕೊಳ್ಳುವ ಮತ್ತಷ್ಟು ಮಂದಿ… ಎಲ್ಲಾ ಇದ್ದೂ ನಮಗೇಕೆ ಕೃಷಿ ಎಂದು ಕಾಲು ಕೀಳುವ ಜನರ ನಡುವೆ ಅಪರೂಪದ ಕೃಷಿಕರು ನಮ್ಮಲ್ಲಿ ಸಾಕಷ್ಟು ಕಂಡು ಬರುತ್ತಾರೆ. ಶಿರಸಿ ಬಳಿಯ ದೇವಗುಡಿ ಊರಿನ ಕೃಷಿಕ ವೆಂಕಟರಮಣ ಭಟ್ಟ ತಮ್ಮ ಮನೆಯಲ್ಲಿ ಸಣ್ಣ ಜಮೀನು ಇದ್ದರೂ ಕೃಷಿ ಚಟುವಟಿಕೆಗಳಿಂದಲೇ ಗುರುತಿಸಿಕೊಂಡಿದ್ದಾರೆ. ಬೇರೆ ಬೇರೆ ಉದ್ಯೋಗ ಅರಸಿ ಹೋಗುವ ಬದಲು, ಕೃಷಿ ಚಟುವಟಿಕೆಗಳಿಂದಲೇ ಬದುಕು ಹೇಗೆ ಸಾಧ್ಯ ಎಂಬುದನ್ನು ನಿರೂಪಿಸಿಕೊಂಡಿದ್ದಾರೆ. 

ಮೊದಲು ಖರೀದಿಸಿದ್ದು ದೋಟಿ

ಶಿರಸಿ ಭಾಗದಲ್ಲಿ ಅಡಿಕೆ ತೋಟವೇ ಹೆಚ್ಚು ಇರುವ ಕಾರಣ, ಕಷ್ಟಕರ ಕೊನೆ ಕೊಯ್ಯುವುದು ಮದ್ದು ಸಿಂಪಡಿಸುವುದು ಈ ಕೆಲಸಗಳಿಗೆ ಕೂಲಿಕಾರ್ಮಿಕರ ಕೊರತೆ ಇರುವುದನ್ನು ಗಮನಿಸುತ್ತಾರೆ. ಈ ಕಾರ್ಯವನ್ನು ತಾವು ಹೇಗೆ ಮಾಡಬಹುದು? ಎಂಬೆಲ್ಲ ವಿಚಾರಗಳು ತಲೆಯಲ್ಲಿ ಸುತ್ತುತ್ತಿದ್ದಾಗ… ಬಂದಿದ್ದು ಹೊಸ ತಂತ್ರಜ್ಞಾನ… 60 ಫೂಟ್ ಉದ್ದದ ದೋಟಿ ಖರೀದಿಸಿ ಮೊದ ಮೊದಲು ಅಷ್ಟು ಎತ್ತರ ಇಲ್ಲದ ಅಡಿಕೆ ಮರದ ಕೊನೆಯನ್ನು ಕೊಯ್ಯುತ್ತಾರೆ… ಹೀಗೆ ಮುಂದೆ ಸಾಗಿದಾಗ ಇದೇ ದೋಟಿಯಿಂದ ತೆಂಗಿನ ಕಾಯಿ ಕೊಯ್ಯಬಹುದು, ಈಗ ಮದ್ದು ಸಿಂಪಡಿಸುವ ಸಮಯ, ದೋಟಿಯಿಂದ ಮದ್ದು ಸಿಂಪಡಿಸಬಹುದು ಎಲ್ಲಾ ತಂತ್ರಜ್ಞಾನವನ್ನು ತಿಳಿದವರಿಂದ ಕೇಳಿ ಅರಿತುಕೊಂಡು ಕಾರ್ಯ ಆರಂಭಿಸುತ್ತಾರೆ. 

ಮೊದಲು ಇವರನ್ನು ಯಾರು ಕೆಲಸಕ್ಕೆ ಕರೆದಿರಲಿಲ್ಲ… ಬಾಳೆಗದ್ದೆ ಊರಿನ ಪಿ ಜಿ ಹೆಗಡೆ ಮೊದಲಾದವರು ತಮ್ಮ ತೋಟಕ್ಕೆ ಕರೆದು ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ… ಈಗ ಇವರು 60 ಫೂಟ್ ಎತ್ತರದ ಅಡಿಕೆ ಕೊನೆಗೆ ಮದ್ದು ಸಿಂಪಡಿಸುವುದು, ಅಡಿಕೆ ಕೊನೆ ಕೊಯ್ಯುವುದು ಕೆಲಸವನ್ನು ತಮ್ಮ ತೋಟದ ಅಷ್ಟೇ ಅಲ್ಲ ಈ ಭಾಗದಲ್ಲಿ, ಯಾರು ಕರೆದರೂ ಅವರ ಮನೆ ತೋಟಕ್ಕೆ ಹೋಗಿ ಮಾಡಿಕೊಟ್ಟು ಬರುತ್ತಾರೆ ಆ ಮೂಲಕ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. 

ಹೂಡಿಕೆ ಇಷ್ಟು

ಅರವತ್ತು ಫೂಟ್ ಉದ್ದದ ದೋಟಿ ಗೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಬ್ಯಾಟರಿ ಮತ್ತು ಪೈಪ್ ಎಲ್ಲಾ ಸೇರಿ ಅರವತ್ತೈದು ಸಾವಿರ ರೂಪಾಯಿ ವೆಚ್ಚ ತಗುಲಿದೆ. ಈಗ ಆಳು ಲೆಕ್ಕದಂತೆ ಬೇರೆಬೇರೆ ರೈತರ ಮನೆಯ ತೋಟಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ತನಗೆ ಇದು ತುಂಬಾ ಸಹಾಯಕವಾಗಿದೆ… ಕಷ್ಟದ ಕೆಲಸಗಳಿಗೆ ಕೂಲಿಯ ಕೊರತೆ ಆಗದಂತೆ ತಾವು ಈ ಕೆಲಸವನ್ನು ಕಲಿತುಕೊಂಡು ದೋಟಿ ಮೂಲಕ ಮಾಡುತ್ತಿರುವುದಾಗಿ ವೆಂಕಟರಮಣ ಭಟ್ಟರು ಹೇಳುತ್ತಾರೆ. ಇಲ್ಲಿರುವ ಸಮಸ್ಯೆ ಒಂದೇ... ದೋಟಿ ಮತ್ತು ಬ್ಯಾಟರಿ ಯಾವುದಕ್ಕೂ ಗ್ಯಾರಂಟಿ ಇರುವುದಿಲ್ಲ, ನಾಜೂಕಿನಿಂದ ಬಳಸಬೇಕು… ಎರಡು ಎಕರೆ ತೋಟ ಇರುವವರು ಇದನ್ನು ಖರೀದಿಸಿದರೂ ಅವರಿಗೆ ಬಹಳ ಉಳಿತಾಯವಾಗುತ್ತದೆ. ತಮ್ಮ ಮನೆಯ ಕೆಲಸವನ್ನು ಬಿಡುವಿನ ವೇಳೆಯಲ್ಲಿ ಮಾಡಿಕೊಳ್ಳಬಹುದು, ಸ್ವಾವಲಂಬಿಗಳಾಗಬಹುದು ಎಂಬುದು ವೆಂಕಟರಮಣ ಭಟ್ಟರ ಅಭಿಪ್ರಾಯ. ವೆಂಕಟರಮಣ ಭಟ್ಟರ ಸಂಪರ್ಕ ಸಂಖ್ಯೆ 9449458033

ಇವರ ಕೃಷಿ ಚಟುವಟಿಕೆಗಳ ಬಗ್ಗೆ ಹಂಸ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಪ್ರಸಾರವಾಗಿದೆ ಕೆಳಗಿರುವ ಲಿಂಕ್ ಅನ್ನು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ 

https://youtu.be/NDBkbJQBjTo


ಪ್ರತಿಕ್ರಿಯೆ

Post a Comment

0 Comments